ಕಾಸರಗೋಡು

 ಕೇರಳ ರಾಜ್ಯದಲ್ಲಿರುವ ಒಂದು ಪಟ್ಟಣ, ಅದೇ ಹೆಸರಿನ ತಾಲ್ಲೂಕು ಮುಖ್ಯಸ್ಥಳ. ಕಣ್ಣಾನೂರು ಜಿಲ್ಲೆಯಲ್ಲಿ, ಪಯಸ್ವಿನಿ ನದಿ ಅರಬ್ಬೀ ಸಮುದ್ರವನ್ನು ಸೇರುವೆಡೆಯಲ್ಲಿದೆ.

 ಕಾಸರಗೋಡು ತಾಲ್ಲೂಕು ಕೇರಳದ ಉತ್ತರದ ತುದಿಯಲ್ಲಿದೆ. ಉತ್ತರ ಪೂರ್ವಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ, ದಕ್ಷಿಣದಲ್ಲಿ ಹೊಸದುರ್ಗ (ಕಾಞಂಗಾಡು) ತಾಲ್ಲೂಕು, ಪಶ್ಚಿಮದಲ್ಲಿ ಅರಬ್ಬೀ ಕಡಲು. ಇವು ಕಾಸರಗೋಡು ತಾಲ್ಲೂಕಿನ ಮೇರೆಗಳು. ತಾಲ್ಲೂಕಿನ ವಿಸ್ತೀರ್ಣ 376.34 ಚ.ಮೈ.

 ಕಾಸರಗೋಡು ತಾಲ್ಲೂಕು ಏರು ತಗ್ಗುಗಳುಳ್ಳ ಪ್ರದೇಶ. ಸಮುದ್ರದ ದಡದಲ್ಲಿ ಅಲ್ಲಲ್ಲಿರುವ ಮರ (ಲ್ಯಾಟರೈಟ್) ಕಲ್ಲಿನ ಗುಡ್ಡಗಳು ಪೂರ್ವಕ್ಕೆ ಹೋದಂತೆಲ್ಲ ಎತ್ತರವಾಗುತ್ತವೆ. ಸಣ್ಣ ಸಣ್ಣ ಕಣಿವೆಗಳು, ತೊರೆಗಳು, ಝರಿಗಳು ಇವೆ. ಅಡಕೆ, ಬತ್ತ, ತೆಂಗು, ಗೇರುಬೀಜ ಮುಂತಾದವನ್ನು ಬೆಳೆಯಲು ನೈಸರ್ಗಿಕ ಅನುಕೂಲತೆಗಳುಳ್ಳ ಫಲವತ್ತಾದ ಭೂಭಾಗವಿದು. ಸಮುದ್ರದ ದಡದಿಂದ ಪೂರ್ವಕ್ಕೆ ಸುಮಾರು ಇಪ್ಪತ್ತು ಮೈಲಿಗಳ ಅನಂತರ ಅಲ್ಲಲ್ಲಿ ದಟ್ಟವಾದ ಕಾಡುಗಳು ಹಬ್ಬಿವೆ.

 ಕಾಸರಗೋಡು ತಾಲ್ಲೂಕಿನ ಕನಿಷ್ಠ ಉಷ್ಣ್ನತೆ 16o ಸೆಂ.-26.7o ಸೆಂ. ಗರಿಷ್ಠ ಉಷ್ಣತೆ 24.6o ಸೆಂ.-35oಸೆಂ. ಜೂನ್ ತಿಂಗಳಲ್ಲಿ ಮಳೆಗಳ ಆರಂಭವಾಗುತ್ತದೆ. ಐದು ತಿಂಗಳು ಮಳೆಗಾಲ. ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಚಂದ್ರಗಿರಿಯ ಹತ್ತಿರ ಅರಬ್ಬೀ ಕಡಲನ್ನು ಸೇರುವ ಪಯಸ್ವಿನಿ ಈ ತಾಲ್ಲೂಕಿನ ನದಿಗಳಲ್ಲೆಲ್ಲ ದೊಡ್ಡದು. ಉಳಿದವು ಮೊಗ್ರಾಲ್, ಕುಂಬಳೆ, ಸಿರಿಯ ಮತ್ತು ಉಪ್ಪಳ ನದಿಗಳು.

 ತಾಲ್ಲೂಕಿನ ಮುಖ್ಯ ಬೆಳೆ ಬತ್ತ. ತಗ್ಗಿನ ಬಯಲುಗಳಲ್ಲಿ ವರ್ಷದಲ್ಲಿ ಮೂರು ಬತ್ತದ ಬೆಳೆಗಳು. ಅಡಕೆ ಬೆಳೆಗೆ ಇದು ಪ್ರಸಿದ್ಧವಾಗಿದೆ. ಇಲ್ಲಿ 8,000 ಎಕರೆಗಳಷ್ಟು ಅಡಕೆ ತೋಟಗಳಿವೆ. ಗೇರುಬೀಜ ಮತ್ತು ಮೆಣಸು ಇಲ್ಲಿಯ ಪ್ರಸಿದ್ಧ ವಾಣಿಜ್ಯ ಬೆಳೆಗಳು. ಸಮುದ್ರತೀರಪ್ರದೇಶದಲ್ಲಿ ತೆಂಗಿನ ಬೆಳೆ ಅಧಿಕ. ಕಾಸರಗೋಡಿಗೆ 21/2 ಮೈ. ದೂರದಲ್ಲಿ ಕೇಂದ್ರೀಯ ಪ್ಲಾಂಟೇಷನ್ ಸಂಶೋಧನ ಸಂಸ್ಥೆಯಿದೆ. ಭಾರತದ ತೆಂಗು, ಅಡಕೆ, ಕೋಕೋ ಮತ್ತು ಗೇರುಬೀಜದ ಸಂಶೋಧನೆಗೆ ಸಂಬಂಧಿಸಿದ ಪ್ರಧಾನ ಕೇಂದ್ರ ಇದು. ಹಿರೇಹಳ್ಳಿ (ಮೈಸೂರು), ಪೀಚಿ (ಕೇರಳ), ಪಲೋಡ್ (ಕೇರಳ), ಮೋತಿನಗರ (ಪಶ್ಚಿಮ ಬಂಗಾಳ), ಕಾಹಿಕುಚಿ (ಅಸ್ಸಾಂ)--ಇವು ಈ ಕೇಂದ್ರದ ಶಾಖೆಗಳು. ಜಗತ್ತಿನ ಎಲ್ಲೆಡೆಗಳಿಂದಲೂ ತರಿಸಿ ಪ್ರಾಯೋಗಿಕವಾಗಿ ಬೆಳೆಸಿದ ನಲವತ್ತೈದು ಜಾತಿಯ ತೆಂಗಿನ ಮರಗಳು ಇಲ್ಲಿವೆ.

 ಕಾಸರಗೋಡು ಅನೇಕ ಮತ, ಜಾತಿ, ಭಾಷೆ ಮತ್ತು ಸಂಸ್ಕøತಿಗಳ ಸಂಗಮ ಸ್ಥಳ. ಈ ತಾಲ್ಲೂಕಿನ ಜನಸಂಖ್ಯೆ 3,44,931(1970 ಏಪ್ರಿಲ್-ಮೇ ಅಂದಾಜು) ಹವ್ಯಕರು (ಕನ್ನಡ), ಶಿವಳ್ಳಿಯವರು (ತುಳು), ಕೋಟದವರು (ಕನ್ನಡ), ಕರ್ಹಾಡರು (ಮರಾಠಿ), ಸ್ಥಾನಿಕರು (ತುಳು), ಸಾರಸ್ವತರು (ಕೊಂಕಣಿ), ಗೌಡಸಾರಸ್ವತರು (ಕೊಂಕಣಿ), ಚಿನಿವಾರರು (ಕನ್ನಡ), ಬಂಟರು (ತುಳು), ಬಂಟರು ಅಥವಾ ನಾಡವರು (ಕನ್ನಡ), ಬಿಲ್ಲವರು (ತುಳು-ಮಲಯಾಳ), ನಾಯರರು (ಮಲಯಾಳ), ಗಾಣಿಗರು (ಕನ್ನಡ-ಮಲಯಾಳ), ಕುಂಬಾರರು (ತುಳು-ಮಲಯಾಳ), ಮರಾಠಿಗರು (ಮರಾಠಿ-ಕನ್ನಡ), ಕೊರಗರು (ತುಳು), ಹರಿಜನರು (ತುಳು), ಮಾದಿಗರು (ಕನ್ನಡ), ಬೈರ (ಕನ್ನಡ), ಮುಸಲ್ಮಾನರಲ್ಲಿ ಮಾಪಿಳ್ಳೆಯವರು (ಮಲಯಾಳ), ತುರುಕರು (ಹಿಂದೂಸ್ತಾನಿ), ಕ್ರೈಸ್ತರಲ್ಲಿ ಪ್ರಾಟೆಸ್ಟಂಟರು (ಕನ್ನಡ-ತುಳು), ಕ್ಯಾಥೊಲಿಕರು (ಕೊಂಕಣಿ)-ಇದು ಭಾಷಾನುಗುಣವಾಗಿ ಜನರ ವಿಂಗಡಣೆ.

 ಬಡಗಿ ಕೆಲಸ, ಚಿನ್ನಬೆಳ್ಳಿ ಕೆಲಸ, ಕಮ್ಮಾರಿಕೆ, ಹೊಲಿಗೆ, ಮಡಕೆ ಮಾಡುವುದು, ಬೀಡಿ ಕಟ್ಟುವುದು, ಚಾಪೆ ತಯಾರಿಸುವುದು ಮುಂತಾದ ಸಣ್ಣ ಸಣ್ಣ ಉದ್ಯಮಗಳಿಂದ ಜೀವಿಸುವ ಶ್ರಮಜೀವಿಗಳ ಸಂಖ್ಯೆ ಇಲ್ಲಿ ಅಧಿಕ. ಗೋಡಂಬಿ ಕಾರ್ಖಾನೆ, ಗರಗಸದ ಕಾರ್ಖಾನೆ, ಮತ್ಸೋದ್ಯಮ, ವಾಹನಗಳ ರಿಪೇರಿ, ಇವು ಇಲ್ಲಿಯ ಕೈಗಾರಿಕೆಗಳು.

 ಈ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯ ಉದ್ದ ದಕ್ಷಿಣೋತ್ತರಕ್ಕೆ 30 ಮೈ. ಕಾಸರಗೋಡಿನಿಂದ ಪೂರ್ವಕ್ಕೆ ಜಾಲ್ಲೂರು ರಸ್ತೆಯ ಉದ್ದ 30 ಮೈ. ಕಾಸರಗೋಡಿನಿಂದ ಈಶಾನ್ಯಕ್ಕೆ ಪುತ್ತೂರಿಗೆ ಹೋಗುವ ರಸ್ತೆಯ ಉದ್ದ 21 ಮೈ. ಉಳಿದವು ಸಣ್ಣಸಣ್ಣ ರಸ್ತೆಗಳು. ದಕ್ಷಿಣ ರೈಲ್ವೆಯ ಬ್ರಾಡ್ ಗೇಜ್ ಮಾರ್ಗ ಈ ತಾಲ್ಲೂಕಿನ ಕರಾವಳಿಯ ಅಂಚಿನಲ್ಲಿ 22 ಮೈಲಿಗಳನ್ನು ಹಾಯ್ದುಹೋಗುತ್ತದೆ.

 ದಕ್ಷಿಣ ಕನ್ನಡ ಜಿಲ್ಲೆ ಮದ್ರಾಸು ಸರ್ಕಾರದ ಆಡಳಿತದಲ್ಲಿದ್ದಾಗ ಹೊಸದುರ್ಗವೂ ಸೇರಿದಂತೆ ಈ ತಾಲ್ಲೂಕು ದಕ್ಷಿಣಕನ್ನಡ ಜಿಲ್ಲೆಯ ಒಂದು ಅಂಗವಾಗಿತ್ತು. 1956ರಲ್ಲಿ ಭಾಷಾನುಗುಣ ರಾಜ್ಯರಚನೆಯಾದ ಮೇಲೆ ಈ ತಾಲ್ಲೂಕು ಕೇರಳ ರಾಜ್ಯಸರ್ಕಾರದ ಆಡಳಿತಕ್ಕೊಳಪಟ್ಟಿತು. 1957ರ ಜನವರಿ 1ರಂದು ಹೊಸದುರ್ಗ (ಕಾಞಂಗಾಡು) ಪ್ರತ್ಯೇಕ ತಾಲ್ಲೂಕಾಯಿತು. ಕಾಸರಗೋಡು ತಾಲ್ಲೂಕಿನಲ್ಲಿ ಒಂದು ಪುರಸಭೆಯೂ ಹದಿನೆಂಟು ಪಂಚಾಯಿತಿಗಳೂ ಇವೆ.

 ಕಾಸರಗೋಡು ತಾಲ್ಲೂಕಿನಲ್ಲಿರುವ ಲೋಯರ್ ಪ್ರೈಮರಿ ಶಾಲೆಗಳು 134, ಅಪ್ಪರ್ ಪ್ರೈಮರಿ ಶಾಲೆಗಳು 65, ಪ್ರೌಢಶಾಲೆಗಳು 20, ಒಂದು ಕುರುಡರ ಶಾಲೆ ಇವೆ. ಕನ್ನಡ-ಮಲೆಯಾಳ ಶಾಲೆಗಳೆರಡೂ ಉಂಟು. ಕನ್ನಡ ಶಾಲೆಗಳೇ ಅಧಿಕ. ಒಂದು ಉಪಾಧ್ಯಾಯರ ಶಿಕ್ಷಣ ಕೇಂದ್ರವಿದೆ. ಒಂದು ಸಂಸ್ಕøತ ಕಾಲೇಜೂ ವಿವಿಧ  ಪದವಿ ತರಗತಿಗಳ ಮತ್ತು ಕನ್ನಡ ಎಂ.ಎ. ತರಗತಿಗಳುಳ್ಳ ಒಂದು ಸರ್ಕಾರಿ ಕಾಲೇಜೂ ಇಲ್ಲಿವೆ.

 ಇತಿಹಾಸ, ಸಂಸ್ಕøತಿ, ಸ್ಥಳಗಳು : ಕಾಸರಗೋಡು ಶಬ್ದದ ನಿಷ್ಪತ್ತಿಯನ್ನು ಸಾಧಿಸಲು ಸ್ಪಷ್ಟವಾದ ಆಧಾರಗಳು ದೊರೆಯುವುದಿಲ್ಲ. ಕಾಸರಕನ ಮರಗಳು ಅಧಿಕವಾಗಿ ಬೆಳೆಯುತ್ತಿದ್ದ ಕಾರಣ ಕಾಸರಕನ ಕಾಡು ಕಾಸರಗೋಡು ಆಗಿದೆಯೆಂದು ಒಂದು ಅಭಿಪ್ರಾಯ. ಕಾಸರಕನ ಮರಗಳು ಈ ಪ್ರದೇಶದಲ್ಲಿ ಅಲ್ಲಲ್ಲಿ ಈಗಲೂ ಕಾಣಸಿಗುತ್ತವೆ. ಕಾಸರಗೋಡಿನ ಹೊರವಲಯದಲ್ಲಿ ಕರಂದ ಕಾಡು, ಬಾರಿಕಾಡು (ಬಾಳೆಕಾಡು) ಎನ್ನುವ ಸ್ಥಳಗಳು ಈಗಲೂ ಉಂಟು. ಕೆಲವರು ಇದಕ್ಕೆ ಸಂಸ್ಕøತ ಮೂಲವನ್ನು ಹೇಳುತ್ತಾರೆ. ಕಾಸಾರಕ್ರೋಢ (ಕೊಳಗಳ ಸಮೂಹ) ಎಂಬುದು ಕಾಸರಗೋಡು ಆಯಿತು ಎಂಬುದು ಇವರ ವಾದ.

 ಪೊಸಡಿಗುಂಪೆಯ ಗುಹೆಗಳು ಈ ಪ್ರದೇಶದ ಇತಿಹಾಸಕ್ಕೆ ಸಂಬಂಧಿಸಿದ ಪ್ರಾಚೀನ ಗುಹೆಗಳು, ಯಜ್ಞಕುಂಡಗಳೂ ತ್ರಿಶೂಲಗಳೂ ಇರುವ ಲ್ಯಾಟರೈಟ್ ಕಲ್ಲಿನ ಗುಹೆಗಳು ಮತ್ಸ್ಯೇಂದ್ರನಾಥನ ಕಾಲದವು ಎಂದು ಊಹಿಸಲಾಗಿದೆ. ಅಡೂರಿನ ಹತ್ತಿರ ಇರುವ ಗುಹೆ ಪೌರಾಣಿಕ ಹಿನ್ನಲೆಯುಳ್ಳದ್ದು. ಕಾಸರಗೋಡಿನ ಬಟ್ಟಂಬಾರೆ ಗುಡ್ಡದಲ್ಲಿ ಪೊಸಡಿಗುಂಪೆಯ ಗುಹೆಯ ಮಾದರಿಯ ಒಂದು ಚಿಕ್ಕ ಗುಹೆಯಿದೆ.

 ಪೆರ್ಲದ ಹತ್ತಿರ ಇರುವ ಅತ್ಯಂತ ಪ್ರಾಚೀನಕಾಲದ ಕೋಟೆಯ ಹೆಸರು ಮಾಯಿಲಕೋಟೆ. ತುಳುನಾಡಿನ ಅರಸರು ಪ್ರಾಬಲ್ಯಕ್ಕೆ ಬರುವ ಮೊದಲು ಇಲ್ಲಿಯ ಮೂಲನಿವಾಸಿಗಳಾದ ಮಾಯಿಲರು ಪ್ರಬಲರಾಗಿದ್ದಾಗ ಕಟ್ಟಿದ ಕೋಟೆಯಿದು.

 ಹಂಗಳದ ಕದಂಬರ ದೊರೆ ನಾಲ್ಕನೆಯ ಮಯೂರವರ್ಮ ಸ್ಥಾಪಿಸಿದ ನಾಲ್ಕು ಕೇಂದ್ರಗಳಲ್ಲಿ ಕಾಸರಗೋಡು ಕೇಂದ್ರವೂ ಒಂದು. ಇದು ಕುಂಬಳೆ ಸೀಮೆ ಅಥವಾ ಕುಂಬಳೆ ರಾಜ್ಯ ಎನ್ನಿಸಿಕೊಂಡಿತ್ತು. ತುಳುನಾಡಿನ ತೆಂಕು ಗಡಿಯಲ್ಲಿದ್ದ ಕುಂಬಳೆ ರಾಜ್ಯಕ್ಕೆ ಉತ್ತರದಲ್ಲಿ ಸೀರೆಹೊಳೆ, ದಕ್ಷಿಣದಲ್ಲಿ ಪಯಸ್ವಿನಿ, ಪಶ್ಚಿಮದಲ್ಲಿ ಅರಬ್ಬೀ ಸಮುದ್ರ, ಪೂರ್ವದಲ್ಲಿ ಅಡೂರು-ಇವು ಆಗ ಇದರ ಚತುರ್ಗಡಿ. ಕುಂಬಳೆ ರಾಜಮನೆತನದ ಸ್ಥಾಪಕನೂ 4ನೆಯ ಮಯೂರ ವರ್ಮನೇ. ಇಕ್ಕೇರಿ ಅರಸರ ದೃಷ್ಟಿ ಕುಂಬಳೆ ರಾಜ್ಯದ ಮೇಲೆ ಬಿದ್ದದ್ದು ಕ್ರಿ.ಶ. 1500ರ ಅನಂತರ. ಕೆಳದಿಯ ಅರಸ ಸದಾಶಿವನಾಯಕ (1513-1546) ಕಾಸರಗೋಡು ಕೋಟೆಯನ್ನು ಕಟ್ಟಿಸಿ ತೊಲಗದ ಕಂಬವನ್ನು (ಅಚಲವಾದ ಜಯಸ್ತಂಭವನ್ನು) ಸ್ಥಾಪಿಸಿದ. ಕೋಟೆಯ ವಿಸ್ತೀರ್ಣ 5 ಎಕರೆ. ಗೋಡೆಗಳನ್ನು ಲ್ಯಾಟರೈಟ್ ಕಲ್ಲಿನಲ್ಲಿ ಕಟ್ಟಲಾಗಿದೆ. ಪಶ್ಚಿಮದಲ್ಲಿ ಹೆಬ್ಬಾಗಿಲು, ಪೂರ್ವದಲ್ಲಿ ಗುಪ್ತದ್ವಾರ, ದುಃಖಸ್ಥಿತಿಯಲ್ಲಿರುವ ಬತೇರಿ, ಕೋಟೆಯೊಳಗೆ ಮಾರುತಿಯ ಸಣ್ಣ ದೇವಾಲಯ ಮತ್ತು ಅದರ ಪಕ್ಕದಲ್ಲಿ ಆಳವೂ ಅಗಲವೂ ಆದ ದೊಡ್ಡ ಪಾಳು ಬಾವಿ ಇವೆ. ಈ ಕೋಟೆ ಇಕ್ಕೇರಿ ಅರಸರ ಕೈತಪ್ಪಿ ಬ್ರಿಟಿಷರ ವಶವಾದ ಮೇಲೆ ಬ್ರಿಟಿಷರು ಮಾರುತಿ ದೇವಾಲಯದ ಅರ್ಚಕರಾಗಿದ್ದ ಶಂಭಟ್ಟರಿಗೆ ಈ ಕೋಟೆಯ ಅಧಿಕಾರಿಯನ್ನು ವಹಿಸಿಕೊಟ್ಟರು. ಶಂಭಟ್ಟರಿಂದ ಚಂದಾವರ್ ಗಣಪಯ್ಯನವರು ಐದು ರೂಪಾಯಿ ಎರಡೂವರೆ ಆಣೆಗೆ ಮೂಲ ಗೇಣಿಗೆ ಪಡೆದುಕೊಂಡರು. ಗಣಪಯ್ಯನವರ ಕುಟುಂಬದ ಒಕ್ಕಲುಗಳು ಈಗಲೂ ಕೋಟೆಯೊಳಗೆ ವಾಸಮಾಡುತ್ತಿದ್ದಾರೆ. ಹೊರಕೋಟೆಯಲ್ಲಿ ಒಂದು ಭೂತದ ಗುಡಿಯಿದೆ. ನರಕಚತುರ್ದಶಿಯ ಕಾಲದಲ್ಲಿ ಬೈದ್ಯರು ಕಟ್ಟುವ ಚಾಮುಂಡೇಶ್ವರಿ. ಧೂಮಾವತಿ, ರಾಜದೈವದ ಕೋಲ ನಡೆಯುತ್ತವೆ.

 ಕುಂಬಳೆ, ಕೋಟೆ ವಿಸ್ತಾರದಲ್ಲಿ ಕಾಸರಗೋಡು ಕೋಟೆಯಷ್ಟೇ ಇದೆ. ಕೊಡಿಯಾಲ, ಮೂಡಬಿದರೆ, ಮೂಲ್ಕಿ, ಉಳ್ಳಾಲ, ಕುಂಬಳೆ, ಪುದುಂವೆಟ್ಟು, ಬೆಳ್ಳಾರೆ, ಕಾಂತಮಂಗಲ, ಒಂದಡ್ಕ, ಚಂದ್ರಗಿರಿ, ಬೇಕಲ, ಹೊಸದುರ್ಗ ಮುಂತಾದ ಕೋಟೆಗಳನ್ನು ಬಲಪಡಿಸಿದವನು ಇಕ್ಕೇರಿ ರಾಜರಾಮನ ಮಗ ಹಿರಿಯ ವೆಂಕಟಪ್ಪನಾಯಕ. 1514ರಲ್ಲಿ ದುರ್ತೆ ಬಾರಬೋಸ್ ಎಂಬ ಪೋರ್ಚುಗೀಸ್ ಪ್ರವಾಸಿ ಕುಂಬಳೆ ಕೋಟೆಗೆ ಬಂದಿದ್ದ.  ಈ ಕೋಟೆಯಿಂದ ಮಾಲ್ಡಿವ್ ದ್ವೀಪಗಳಿಗೆ ಅಕ್ಕಿಯನ್ನು ಕಳುಹಿಸುತ್ತಿದ್ದರೆಂದೂ ಅದಕ್ಕೆ ಬದಲಾಗಿ ಹಗ್ಗಹುರಿಗಳನ್ನು ಕೊಳ್ಳುತ್ತಿದ್ದರೆಂದೂ ಅವನು ಹೇಳಿದ್ದಾನೆ. ಈ ಕೋಟೆಯಿಂದ ಪೋರ್ಚುಗೀಸರಿಗೆ ಹೇರಳವಾಗಿ ಅಕ್ಕಿ ಸಾಗುತ್ತಿತ್ತು. ಕುಂಬಳೆಯ ಪ್ರಖ್ಯಾತ ಅರಸು ಇಮ್ಮಡಿ ಜಯಸಿಂಹ ಪಾಂಡ್ಯರಾಜನನ್ನು ಚಂದ್ರಗಿರಿಯ ಹತ್ತಿರ ಸೋಲಿಸಿ ಹಿಮ್ಮೆಟ್ಟಿಸುವಷ್ಟು ಈತ ಪ್ರಬಲನಾಗಿದ್ದ. ಕುಂಬಳೆಸೀಮೆ ಕ್ಷೀಣಸ್ಥಿತಿಗಿಳಿದದ್ದು 17ನೆಯ ಶತಮಾನದಲ್ಲಿ. ಆಗ ಕುಂಬಳೆಯಲ್ಲಿ ಆಳುತ್ತಿದ್ದ ಕೃಷ್ಣರಾಯ ಕುಂಬಳೆಗೆ 7ಮೈಲಿ ದೂರದಲ್ಲಿ ಮಾಯಿಪ್ಪಾಡಿಯಲ್ಲಿ (ಸಿರಿಬಾಗಿಲು) ಪ್ರತ್ಯೇಕ ಅರಮನೆಯನ್ನು ಕಟ್ಟಿಸಿಕೊಂಡು ವಾಸಮಾಡತೊಡಗಿದ. ಆದರೆ ಅವನ ಒಬ್ಬ ರಾಣಿ ಮಾತ್ರ ಕುಂಬಳೆ ಅರಮನೆಯನ್ನು ಬಿಡದೆ ಅಲ್ಲಿಯೇ ಉಳಿದಳು. ಮಾಯಿಪ್ಪಾಡಿ ಅರಮನೆಯಲ್ಲಿ ನೆಲೆಸಿದ ರಾಜನ ವಂಶಸ್ಥರು ಈಗಲೂ ಇದ್ದಾರೆ, ಈ ಕೋಟೆಗಳಲ್ಲದೆ ಇಕ್ಕೇರಿ ಅರಸರ ಕಾಲದಲ್ಲಿ ಕಟ್ಟಿದ ಚಂದ್ರಗಿರಿ ಕೋಟೆ, ಒಂದೆಡ್ಕ, ಪಳಲಿಕೋಟೆ ಮುಂತಾದವು ಈ ತಾಲ್ಲೂಕಿನಲ್ಲಿವೆ.

 ಅಡೂರು, ಮಧೂರು, ಕಾವು ಮತ್ತು ಕಣಿಪುರಗಳ ದೇವಾಲಯಗಳು ಕುಂಬಳೆ ಅರಸರ ಕಾಲದಿಂದಲೂ ಪ್ರಸಿದ್ಧಿಹೊಂದಿವೆ. ಅರ್ಜುನ ಪಾಶುಪತಾಸ್ತ್ರವನ್ನು ಪಡೆಯಲು ತಪಸ್ಸುಮಾಡಿದ ಇಂದ್ರಕೀಲವೇ ಅಡೂರು-ಎಂಬುದು ಅಲ್ಲಿಯ ಸ್ಥಳಪುರಾಣ. ಅದಕ್ಕೆ ಉರುಡೂರು ಎಂಬುದು ಮತ್ತೊಂದು ಹೆಸರು. ಕುಂಬಳೆ ರಾಜ್ಯದ ಅರಸರು ತಮ್ಮ ರಾಯಸ ಮೊದಲಾದ ಆಡಳಿತ ಪತ್ರವ್ಯವಹಾರಗಳಿಗೆ ಉಪಯೋಗಿಸುತ್ತಿದ್ದ  ಶ್ರೀ ಉರುಡೂರು ಮಹಾಲಿಂಗೇಶ್ವರ ಪ್ರಸನ್ನ ಎನ್ನುವ ಮುದ್ರೆ ಅಡೂರು ಶ್ರೀ ಮಹಾಲಿಂಗೇಶ್ವರನ ಅಂಕಿತದ್ದು. ಅಡೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಚಾಳುಕ್ಯರ ಅರಸ 2ನೆಯ ಮಯೂರವರ್ಮನ ಕನ್ನಡ ಶಾಸನವಿದೆ.

 ಕಾಸರಗೋಡಿನಿಂದ ಈಶಾನ್ಯಕ್ಕೆ ಐದುಮೈಲಿಯಲ್ಲಿ ಮಧೂರು ಶ್ರೀ ಮದನಂತೇಶ್ವರ ದೇವಾಲಯವಿದೆ. ತಲೆದೂಗುವ ತೆಂಗು, ನಲಿದಾಡುವ ಕೌಂಗು, ಸುತ್ತಲೂ ಫಲವತ್ತಾದ ಗದ್ದೆಬಯಲು, ಎದುರಿನಲ್ಲಿ ಮಧುವಾಹಿನಿ, ಪಕ್ಕದಲ್ಲಿ ದೊಡ್ಡಕೊಳ; ಪ್ರಶಾಂತ ಪರಿಸರ. ಶ್ರೀಮದನಂತೇಶ್ವರ  ದೇವಾಲಯದ ಎದುರು ಮಂಟಪದಲ್ಲಿ ಪುತ್ರಕಾಮೇಷ್ಟಿಯಾಗದಿಂದ ಶ್ರೀರಾಮಜನನದವರೆಗಿನ ಕಥಾವೃತ್ತಾಂತವನ್ನು ಮರದಲ್ಲಿ ಕೆತ್ತಲಾಗಿದೆ. ದೇವಾಲಯದೊಳಗೆ  ಪೂರ್ವಾಭಿಮುಖವಾಗಿ ಶ್ರೀ ಸಿದ್ಧಿ ವಿನಾಯಕನ ವಿಗ್ರಹವಿದೆ. ಈ ಮೂರ್ತಿ ಮದರು ಎನ್ನುವ ಹರಿಜನ ಸ್ತ್ರೀಯೊಬ್ಬಳಿಗೆ ಹುಲ್ಲು ಕುಯ್ಯುತ್ತಿದ್ದಾಗ ಸಿಕ್ಕಿತೆಂದೂ ಆದ್ದರಿಂದಲೇ ಈ ಸ್ಥಳಕ್ಕೆ ಮದರೂರು, ಮಧೂರು ಎಂದು ಹೆಸರು ಬಂತೆಂದೂ ಸ್ಥಳಪುರಾಣವುಂಟು. ಅಪಾರವೆಚ್ಚದಿಂದ ಜರಗುವ ಮೂಡಪ್ಪಸೇವೆ ಈ ದೇವಾಲಯದ ವೈಭವದ ಉತ್ಸವ. ಕಾವು (ಮುಜುಂಗಾವು) ಶ್ರೀ ಪಾರ್ಥಸಾರಥಿಯ ದೇವಾಲಯವನ್ನು ಮುಚುಕುಂದ ಮುನಿ ಸ್ಥಾಪಿಸಿದನೆಂದು ಪ್ರತೀತಿಯುಂಟು. ದೇವಾಲಯದ ಎದುರಿನಲ್ಲಿರುವ ದೊಡ್ಡ ಕೊಳಕ್ಕೆ ಮುಚುಕುಂದ ತೀರ್ಥವೆಂದು ಹೆಸರು. ಕಣಿಪುರದಲ್ಲಿ ಶ್ರೀ ಗೋಪಾಲಕೃಷ್ಣ ದೇವಾಲಯವಿದೆ. ಕಣಿಪುರಕ್ಕೆ ಕಣ್ವಪುರ, ಕಣಿಯರ, ಕುಂಬಳೆ ಎಂಬ ಹೆಸರುಗಳೂ ಇವೆ. ಇಲ್ಲಿಯ ಶ್ರೀ ಗೋಪಾಲಕೃಷ್ಣನ ಮೂರ್ತಿಯನ್ನು ಕಣ್ವಮುನಿಗಳು ಪ್ರತಿಷ್ಠಾಪಿಸಿದರೆಂದು ಸ್ಥಳಪುರಾಣ. ಈ ಮೂರ್ತಿ ತೆಂಕುತಿಟ್ಟು ಯಕ್ಷಗಾನ ಕಲಾವಿದರ ಆರಾಧನೆಯ ದೈವ.

 ಮಂಜೇಶ್ವರದ ಶ್ರೀ ಅನಂತೇಶ್ವರ ದೇವಾಲಯ ಮಧ್ವಮತಾನುಯಾಯಿಗಳಾದ ಗೌಡಸಾರಸ್ವತರದು. ಭದ್ರ ನರಸಿಂಹ  ಇಲ್ಲಿಯ ಪ್ರಧಾನ ದೇವತೆ. ಶಿವಲಿಂಗದಲ್ಲಿ  ವಿಷ್ಣುವಿನ ಸನ್ನಿಧಾನವನ್ನು ನಂಬಿ ಆರಾಧಿಸಿಕೊಂಡು ಬರುತ್ತಿರುವ ಒಂದು ಶುದ್ಧ ವೈಷ್ಣವ ಕ್ಷೇತ್ರ ಮಂಜೇಶ್ವರ. ಭದ್ರನರಸಿಂಹಮೂರ್ತಿಯ ಸಿಂಹಾಸನದ ಹಿಂದೆ ಇಡೀ ಗರ್ಭಗೃಹದಲ್ಲಿ ಒಂಬತ್ತು ಅಡಿಗಳ ಎತ್ತರವಿರುವ ಒಂದು ದೊಡ್ಡ ಹುತ್ತವಿದೆ. ಇದಕ್ಕೆ ಸಂಬಂಧಿಸಿದಂತೆ  ಷಷ್ಠಿಯ ಕಾಲದಲ್ಲಿ ಐದು ದಿನಗಳ ಜಾತ್ರೆ ನಡೆಯುತ್ತದೆ. ಹೇರಳವಾದ ಸಂಪತ್ತು ತುಂಬಿ ತುಳುಕಿದ್ದ ಈ ಕ್ಷೇತ್ರ ಆಗಾಗ ಲೂಟಿಗೊಳಗಾಗಿ ಜೀರ್ಣೋದ್ಧಾರ ಪಡೆದ ಇತಿಹಾಸವಿದೆ. ಕುಂದಾಪುರದ ಉತ್ತರಗಡಿಯಿಂದ ತಲಚೇರಿಯವರೆಗೆ ಗೌಡ ಸಾರಸ್ವತ ಸಮಾಜದ ಹದಿನೆಂಟು ಪೇಟೆಯ ದೇವಸ್ಥಾನವೆನ್ನಿಸಿಕೊಂಡ ವೈಶಿಷ್ಟ್ಯ ಇದಕ್ಕುಂಟು. ಇಲ್ಲಿ 135 ವರ್ಷಗಳ ಹಿಂದೆ ನಿರ್ಮಿತವಾದ ಒಂದು ಬ್ರಹ್ಮರಥವಿದೆ. ಇದರ ಎತ್ತರ 17', ಅಗಲ 17'.ಅಟ್ಟಳಿಗೆಗಳಿಂದ ಅಲಂಕೃತವಾದಾಗ 71' ಎತ್ತರಕ್ಕೇರುವ ರಮ್ಯರಥವಿದು. ಈ ದೇವಸ್ಥಾನದ ಹೊರಭಾಗದಲ್ಲಿ ಒಂದು ಜೋಗಿ ದೈವದ ಕಲ್ಲುಂಟು. ಇದು ಭೂತಪ್ರೇತಗಳನ್ನು ಬಿಡುಸುವುದೆಂದು ನಂಬಿಕೆಯಿದೆ. ಪ್ರತಿನಿತ್ಯವೂ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಇಲ್ಲಿಗೆ ಬರುತ್ತಾರೆ.

 ಕರ್ಹಾಡದಲ್ಲಿ ಬ್ರಾಹ್ಮಣ ಸಮಾಜದವರ ದೇವಾಲಯಗಳಿವೆ. ಅಗಲ್ಪಾಡಿ, ಮಲ್ಲ, ತೈರೆ, ಬಾಯಾರುಗಳಲ್ಲಿ ಈ ಸಮಾಜದವರು ನಂಬಿ ಆರಾಧಿಸುವ ದುರ್ಗಾ ಪರಮೇಶ್ವರಿ ದೇವಾಲಯಗಳುಂಟು. ಇವನ್ನು ಮಠಗಳೆಂದೂ ಕರೆಯುತ್ತಾರೆ. ಅಗಲ್ಪಾಡಿ ದೇವಾಲಯದಲ್ಲಿ ನಡೆಯುವ ಅನ್ನದಾನದ ಕೀರ್ತಿಯಿಂದಾಗಿ ದುರ್ಗಾಪರಮೇಶ್ವರಿ ಅನ್ನಪೂರ್ಣೇಶ್ವರಿಯಾಗಿದ್ದಾಳೆ. ಇಲ್ಲಿ ಪ್ರತಿವರ್ಷ ಮಾಘಶುದ್ಧ ಪಂಚಮಿಯಿಂದ ದಶಮಿಯ ತನಕ ವೈಭವಪೂರ್ಣಜಾತ್ರೆ ನಡೆಯುತ್ತದೆ. ಎರಡು ಎಕರೆ ಜಾಗವನ್ನೊಳಗೊಂಡ ಈ ದೇವಾಲಯದ ಆವರಣದಲ್ಲಿ ಒಂದು ದೊಡ್ಡ ಕೊಳವುಂಟು. ಕರ್ಹಾಡ ಬ್ರಾಹ್ಮಣಸಮಾಜದ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯ ಚಟುವಟಿಕೆಗಳ ಆಶ್ರಯಸ್ಥಾನವಾದ ಕ್ಷೇತ್ರ.

 ಪೆರಡಾಲದ ಶ್ರೀ ಉದನೇಶ್ವರ ಕಿಡೂರು ಶ್ರೀ ಮಹಾಲಿಂಗೇಶ್ವರ, ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ, ಕುಂಟಿಕ್ಕಾನ ಶ್ರೀ ಶಂಕರನಾರಾಯಣ-ಮುಂತಾದ ದೇವತೆಗಳು ಇಲ್ಲಿ ಹವ್ಯಕಸಮಾಜದವರು ಆರಾಧಿಸುವ ದೇವತೆಗಳು.

 ಕಾಸರಗೋಡಿನಿಂದ ಎರಡು ಮೈಲಿ ಈಶಾನ್ಯಕ್ಕಿರುವ ಕೂಡಲು ಶ್ರೀ ವಿಷ್ಣು ಮಂಗಲ ಕ್ಷೇತ್ರ ತುಂಬ ಪುರಾತನವಾದುದು. ಈ ಕ್ಷೇತ್ರದ ದಕ್ಷಿಣ ಭಾಗದಲ್ಲಿರುವ ಕೆರೆಗೆ ಚಕ್ರತೀರ್ಥವೆಂದು ಹೆಸರು. ಕುಂಬಳೆಯ ಅರಸನಾದ ಜಯಸಿಂಹ ಶ್ರೀ ಮಧ್ವಾಚಾರ್ಯರನ್ನು ಇಲ್ಲಿಗೆ ಬರಮಾಡಿಕೊಂಡಿದ್ದನೆಂದೂ ಅದನ್ನು ತಿಳಿದ ಕಾವು ಮಠದ ತ್ರಿವಿಕ್ರಮಪಂಡಿತ (ಶ್ರೀ ಶಂಕರಾಚಾರ್ಯರ ಶಿಷ್ಯ) ಶ್ರೀ ಮಧ್ವಾಚಾರ್ಯರೊಂದಿಗೆ ಮತ ಚರ್ಚೆಗೆ ನಿಂತನೆಂದೂ ಎಂಟು ದಿನಗಳವರೆಗೆ ನಡೆದ ವಾದದಲ್ಲಿ ತ್ರಿವಿಕ್ರಮ ಪಂಡಿದ ಸೋತು ಆಚಾರ್ಯರ ಶಿಷ್ಯನಾದನೆಂದೂ ಹೇಳಲಾಗಿದೆ. ಇವರಿಬ್ಬರೂ ಚರ್ಚೆ ನಡೆಸಿದ ಸ್ಥಳಕ್ಕೆ ಕೂಡಲು ಎಂದು ಹೆಸರಾಯಿತು.

 ಇವೇ ಅಲ್ಲದೆ, ಮುಳಿಯೂರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯ, ಅನಂತಪುರದ ಅನಂತೇಶ್ವರ ದೇವಾಲಯ, ಕಾಸರಗೋಡಿನ ಮಲ್ಲಿಕಾರ್ಜುನ ಮತ್ತು ವೆಂಕಟರಮಣ ದೇವಾಲಯ-ಇವು ಪ್ರೇಕ್ಷಣೀಯ ಕ್ಷೇತ್ರಗಳು.

 ಕಾಸರಗೋಡಿನಿಂದ ಪೂರ್ವಕ್ಕೆ 7ಮೈಲಿ ದೂರದಲ್ಲಿ ಎಡನೀರು ಮಠವಿದೆ. ಶ್ರೀ ಶಂಕರಾಚಾರ್ಯರ ಶಿಷ್ಯಪರಂಪರೆಯಲ್ಲಿ ಪ್ರಖ್ಯಾತರಾದ ತ್ರೋಟಿಕಾಚಾರ್ಯರ ಕಾಲದಲ್ಲಿ ಸ್ಥಾಪಿತವಾದ ಮಠವಿದು. ಈ ಮಠಾಧೀಶರಾಗಿ ಧರ್ಮಪ್ರಚಾರಮಾಡಿದ ಹದಿಮೂರು ಮಂದಿ ಗುರುಗಳ ಸಮಾಧಿಗಳು ಇಲ್ಲುಂಟು. ಮಠದ ಆವರಣದಲ್ಲಿ ಶ್ರೀ ಗೋಪಾಲಕೃಷ್ಣ ದೇವಾಲಯವಿದೆ. ಶ್ರೀಮದೀಶ್ವರಾನಂದ ಸ್ವಾಮೀಜಿಯವರು ತೆರೆದ ಉಚಿತ ಶಿಕ್ಷಣ ಪ್ರೌಢಶಾಲೆ ಈ ಮಠದ ಆಶ್ರಮದಲ್ಲಿ ನಡೆಯುತ್ತಿದೆ. ಇದು ಧರ್ಮ, ಸಂಸ್ಕøತಿ, ಸಾಹಿತ್ಯ, ಕಲೆ ಮುಂತಾದವನ್ನು ಅಭಿವೃದ್ಧಿಗೊಳಿಸುತ್ತಿರುವ ಒಂದು ಕ್ಷೇತ್ರ.

 ಅಡೂರಿನಲ್ಲಿ ಏರಿದ ಕೊಡಿ (ಧ್ವಜಾರೋಹಣ) ಮಧೂರಿನಲ್ಲಿ ಇಳಿಯಬೇಕು ಎನ್ನುವ ಸಂಪ್ರದಾಯವುಂಟು. ಮೀನಮಾಸ ಸಂಕ್ರಮಣದಲ್ಲಿ ಪ್ರಾರಂಭವಾಗಿ ಮೇಷಮಾಸದ ಐದನೆಯ ದಿನ ಜಾತ್ರೆಗಳು ಮುಕ್ತಾಯಗೊಳ್ಳುತ್ತವೆ. ಅಡೂರು, ಕಾಸರಗೋಡು, ಪೈಕ, ಬೆದರಡ್ಕ, ಅಂಬಲಡ್ಕ, ಪುತ್ತಿಗೆ ಮತ್ತು ಮಧೂರುಗಳಲ್ಲಿ ತಲಾ ಐದು ದಿನಗಳಂತೆ ಒಟ್ಟು ಮೂವತ್ತೈದು ದಿನಗಳು ಎಡೆಬಿಡದೆ ನಡೆಯುವುದು ಇಲ್ಲಿಯ ಜಾತ್ರೆಗಳ ವೈಶಿಷ್ಟ್ಯ.

 ಕಾಸರಗೋಡಿನ ತಳಂಗೆರೆಯಲ್ಲಿರುವ ಮಾಲಿಕ್ ದೀನಾರನ ಕಾಲದಲ್ಲಿ ನಿರ್ಮಿತವಾದುದೆಂದು ಪ್ರತೀತಿಯಿರುವ ಪ್ರಾಚೀನ ಮಸೀದಿಯಲ್ಲದೆ ಈ ತಾಲ್ಲೂಕಿನಲ್ಲಿ ಅಲ್ಲಲ್ಲಿ ಹಲವು ಮಸೀದಿಗಳಿವೆ. ಹತ್ತಕ್ಕೂ ಹೆಚ್ಚು ಚರ್ಚುಗಳು ಈ ತಾಲ್ಲೂಕಿನಲ್ಲುಂಟು. ಮಂಜೇಶ್ವರದಲ್ಲಿ ಒಂದು ಜೈನಬಸದಿ, ಕಾಸರಗೋಡಿನ ನೆಲ್ಲಿಕುಂಟೆಯಲ್ಲಿ ಒಂದು ವೀರ ಶೈವಮಠ-ಇವು ಜೈನ ಮತ್ತು ಶೈವಮತಪ್ರಚಾರಶಾಖೆಯಾಗಿ ಉಳಿದಿವೆ.

 ಕಾಸರಗೋಡು ತಾಲ್ಲೂಕು ತೆಂಕುತಿಟ್ಟು ಯಕ್ಷಗಾನದ ತೌರು. ಯಕ್ಷಗಾನದಲ್ಲಿ ಪ್ರಸಿದ್ಧವಾದ ಪಾರ್ತಿಸುಬ್ಬ (ಸು. 1760-1820) ಕುಂಬಳೆಯವ. ಕೂಡ್ಲು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಭಾ, ಕುಂಬಳೆ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಲಿ, ಇಚಲಂಪಾಡಿ ಮೇಳ ಮತ್ತು ಕೊರಕೋಡು ಮೇಳಗಳು ಯಕ್ಷಗಾನ ಕಲೆಯನ್ನು ವಿಸ್ತಾರಗೊಳಿಸಿದ ಕಲಾಮಂಡಲಗಳು. ಈ ತಾಲ್ಲೂಕಿನಲ್ಲಿ ತಾಳಮದ್ದಲೆಯ ಕಲಾವಿದರಿಲ್ಲದ ಗ್ರಾಮವಿಲ್ಲ. ಭಾಷಾಭೇದವಿಲ್ಲದೆ ಅವ್ಯಾಹತವಾಗಿ ಪ್ರೋತ್ಸಾಹ ಪಡೆದು ಬೆಳಗುತ್ತಿರುವ ಕಲೆಯಿದು. ಮಲಯಾಳ ಮಾತೃಭಾಷೆ ಆಗಿರುವವರಲ್ಲೂ ಕನ್ನಡ ಯಕ್ಷಗಾನ ಕಲಾವಿದರು ಅನೇಕರಿದ್ದಾರೆ.

 ಕನ್ನಡದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳು ಕಾಸರಗೋಡು ತಾಲ್ಲೂಕಿನವರು. ಈಗಲೂ ಎಲ್ಲಿ ಅನೇಕ ಹಿರಿಕಿರಿಯ ಕನ್ನಡ ಕವಿಗಳಿದ್ದಾರೆ.

 ಕುಂಬಳ, ಕೋಳಿ ಅಂಕ, ಅಳಿಯಸಂತಾನಕಟ್ಟು, ದಸರಾ ಉತ್ಸವ, ದೀಪಾವಳಿ, ಷಷ್ಠಿಯ ಉತ್ಸವ-ಮುಂತಾದ ಆಚರಣೆಗಳಲ್ಲಿ ದಕ್ಷಿಣದ ತುಳು ಸಂಸ್ಕøತಿ ಇಲ್ಲಿ ಬೇರೂರಿ ನಿಂತಿದೆ. ಮರುಮಕ್ಕತ್ತಾಯಂ, ಕಥಕ್ಕಳಿ, ಓಣಂ-ಮೊದಲಾದ ಮಲಯಾಳ ಸಂಸ್ಕøತಿಯ ಉತ್ಸವಗಳಿಗೂ ಇದು ಆಹ್ವಾನ ನೀಡಿದೆ.

 ಕುಂಬಳೆಯ ಅರಸರ ಕಾಲದಲ್ಲಿ ಪ್ರಸಿದ್ಧಿಹೊಂದಿದ್ದ ಅಡೂರು, ಮಧೂರು, ಕಾವು ಮತ್ತು ಕಣಿಪುರಗಳ ದೇವಸ್ಥಾನಗಳಂತೆಯೇ ಆ ಕಾಲದಿಂದಲೂ ಪ್ರಸಿದ್ಧಿಯಾಗಿರುವ ನಾಲ್ಕು ಭೂತ ಸ್ಥಾನಗಳು ಈ ತಾಲ್ಲೂಕಿನಲ್ಲಿವೆ. ಪೈಕ, ಬೆದರಡ್ಕ, ಅಂಬಲಡ್ಕ ಮತ್ತು ಪುತ್ತಿಗೆ-ಇವೇ ಆ ನಾಲ್ಕು ಭೂತಸ್ಥಾನಗಳು. ಪಂಜುರ್ಲಿ, ಧೂಮಾವತಿ (ಜುಮಾದಿ). ಕಲ್ಲುರ್ಟಿ, ಕಲ್ಕುಡ, ಅಣ್ಣಪ್ಪ-ಮೊದಲಾದ ತುಳು ಭೂತಗಳಂತೆ ಪಿಲಿ.

ಚಾಮುಂಡಿ, ಮುತ್ತಪ್ಪದೈವಂ, ಬೆಳ್ಜಪಾಡ, ರಕ್ತೇಶ್ವರಿ ಇತ್ಯಾದಿ ಮಲಯಾಳ ಭೂತಗಳೂ ಪೂಜೆಗೊಳ್ಳುವ ಪ್ರದೇಶವಿದು. ಹಿಂದೂಗಳೂ ಮುಸ್ಲಿಮರೂ ನಂಬುವ ಅಲಿಭೂತ ಈ ತಾಲ್ಲೂಕಿನ ವಿಶಿಷ್ಟಭೂತ.

 ವಿಷ್ಣು, ಶಿವ, ಶಕ್ತಿ, ನಾಗಗಳು ಮತ್ತು ಭೂತಗಳು ಆರಾಧನೆಗೊಳ್ಳುವ, ಹಿಂದೂ, ಮುಸ್ಲಿಂ, ಕ್ರೈಸ್ತ ಮತ್ತು ಜೈನ ಸಮುದಾಯಗಳ, ವಿವಿಧ ಭಾಷೆಗಳ ಜಾನಪದ ಕಲೆಗಳ, ಕಲಾವಿದರ, ಮಧುರಮೈತ್ರಿಯ ಸಂಗಮಸ್ಥಳ-ಕಾಸರಗೋಡು ತಾಲ್ಲೂಕು.

     

 (ಬಿ.ಕೆ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ